You are hereಮಾತಾಡಬೇಕು
ಮಾತಾಡಬೇಕು
ಕತ್ತಾಳೆಯ ಮುಳ್ಳುಗಳು ಹಾಲಿಲ್ಲದ ಕಳ್ಳಿಗಳು
ಮೈಸಿಗಿಯುವ ಬಾಡಬಕ್ಕದ ಗಿಡಗಳು
ಇವುದರ ಜೊತೆಗೆ ಕೊಂಚ ಮಾತಾಡಬೇಕು
ಬಾಡಿಗೆ ಬೆಳಕಿನ ಚಂದ್ರನಿಗೆರವಷ್ಟು
ಪ್ರಶ್ನೆ ಕೇಳಬೇಕು
ಚಂದದ ಗುಲಾಬಿಯನ್ನು ಮುಳ್ಳುಗಳಿಂದ
ಬಿಡುಗಡೆ ಮಾಡಬೇಕು
ಜಲವಿಲ್ಲದ ಬಾವಿಗಳು ಮಾತಿಲ್ಲದ ಮಂತ್ರಿಗಳು
ಸೀಗೆಮೆಳೆಗಳು ಓಡಾಡುವ ಪೋಲೀಸರು
ಲೋಕವೇ ನಾ ನಿನ್ನ ನೋಡಬೇಕು
ಭಾಷಣಗಳಂತೆ ಬರುವ ಬಿಳಿ ಮೋಡಗಳಿಂದ
ತೊರೆ ಹರಿಯುವುದಿಲ್ಲ-ಹಸಿರು ಏಳುವುದಿಲ್ಲ
ಕಾಲ ಕಾಲಕ್ಕೆ ಬರದಂತೆ ಮಳೆಯನ್ನು ತಡೆಯುತ್ತಿರುವವರಾರು?
ಕಾಮನ ಬಿಲ್ಲಿನಿಂದ ನಕ್ಷತ್ರಗಳನ್ನು ಕತ್ತರಿಸುತ್ತಿರುವವರಾರು?
ಸೂರ್ಯನನ್ನು ಸೆರಗಿನಿಂದ ಮರೆಮಾಡಿಕೊಂಡು
ಕೆದರಿದ ಕತ್ತಲೆಯನ್ನು ಎತ್ತರಿಸುತ್ತಿರುವವರಾರು?
ಮಾವುಹಲಸುಗಳ ಫಲಕಿತ್ತುಕೊಂಡು
ಹೆಣ್ಣೂ ಅಲ್ಲದ-ಗಂಡೂ ಅಲ್ಲದ
ಆತ್ಮಗಳನ್ನು ಹುಟ್ಟಿಸುತ್ತಿರುವವರಾರು?
ಲೋಕವೇ ನಾನಿನ್ನ ನೋಡಬೇಕು
ನಿನ್ನೊಡನೆ ಮಾತಾಡಬೇಕು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page