You are hereಮಸಣದ ಚೆಲುವೆಗೆ

ಮಸಣದ ಚೆಲುವೆಗೆ


ಕವನಗಳ ನಾಬರೆಯಲು
ಆಶ್ರಯಿಸಿದೆ ನಿನ್ನ
ನಗೆ ಚಿಮ್ಮಿಸಿ ಬಾರೆನ್ನುತ
ನೀನಪ್ಪಿದೆ ನನ್ನ

ಗೋರಿಯ ಮೇಲಣ ಮರಗಳ
ತಂಗಾಳಿಯ ತಂಪು
ಮರ್ಮರ ದನಿ ಮೊರೆಯುತ್ತಿದೆ
ಮೈಕಿವಿಗಳಿಗಿಂಪು

ಗಡಿಬಿಡಿಯಲಿ ಪಾರಾಗಲು
ನಾಬಂದೆನು ಇಲ್ಲಿ
ಸಂಭಾಷಿಸಿ ಸುಳಿದಾಡುವೆ
ನೀ ಮಾತಿನ ಮಲ್ಲಿ

ಉದ್ಯಾನದಿ ಸಾಗುತ್ತಿದೆ
ಸಿರಿವಂತರ ಮೋಜು
ನಾಬಡವನು ನನಗೇತಕೆ
ಉದ್ಯಾನದ ಗೋಜು

ಹೆಣದೊಡವೆಯ ಹೆಣಗುಬಸುವ
ಸತ್ತಿರುವರ ಸೀರೆ
ತೊಟ್ಟುಟ್ಟರು ನೀನಾಗಿಹೆ
ವೈಯಾರದ ನೀರೆ

ನೀನೆಯೆ ಸರಿ ನೀನೆಯೆಸಿರಿ
ನೀ ನನ್ನಯ ಹೆಣ್ಣು
ನಿನ್ನನು ನಾ ಮೆಚ್ಚಿರುವೆನು
ನೀ ಕಾವ್ಯದ ಕಣ್ಣು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು