You are hereಮಂಕಾದ ಜನ

ಮಂಕಾದ ಜನ


ಮಣ್ಣಲ್ಲಿ ಅರಳಿ ಮುಗಿಲಲ್ಲಿ ಮಿನುಗಿ
ಬೆಳಕಾಗಿ ಬರುವ ಜನರೇ
ನೂರಾರು ತೇರು ಹರಿಯುವಾ ದಿವಸ
ಮಂಕಾಗಿ ನಿಂತಿರೇಕೆ

ಈ ನೆಲದ ತುಂಬ ನಗೆ ಹೊನಲ ಹರಿಸಿ
ಪೈರು ಪಲ್ಲಕ್ಕಿ ತರುವ ಜನರೇ
ಧರೆ ಹತ್ತಿ ಉರಿದು ಒಣಭೂಮಿ ಸುರಿದು
ಜಲಬತ್ತಿ ಹೋದುದೇಕೆ

ಇವನೆನ್ನ ಅಣ್ಣ ಅವನೆನ್ನ ತಮ್ಮ
ಜಗವೆಲ್ಲ ಬಂಧು ಬಳಗ
ಅಂತರಂಗದ ಈ ಹಂಬಲವು
ಮೈತಾಳಲಾರದೇನು

ನುಚ್ಚಾದ ಕನಸು ತಲೆಯೆತ್ತಿ ಮತ್ತೆ
ಹಸಿರಾಗಿ ಹೊಳೆಯದೇನು
ಮನವ ಹೊಕ್ಕಿರುವ ಕತ್ತಲೆಯ ಕಳೆದು
ಹೊಸಲೋಕ ಕಾಣದೇನು

ನೊಂದವಗೆ ನಲಿವು ಹಸಿದವಗೆ ಅನ್ನ
ಬಸವಳಿದ ತಲೆಗೆ ಸೂರು
ಬಿದ್ದವರ ಮುಖದ ಕಂಬನಿಯ ತೊಳೆದು
ಕೈಯೆತ್ತಿ ಬರಲಿ ನೂರು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು

ಓದುಗರ ಅಭಿಪ್ರಾಯಗಳು

Search