You are hereಭೂತನ ಕಥೆ

ಭೂತನ ಕಥೆ


ದಲಿತರ ದೇವರು ಧರಣೀಗೆ ದೊಡ್ಡೋನು
ವೀರಾಧಿವೀರ ಭೂತಪ್ಪ ಸೋತಂಥ
ಮರ್ಮದ ಕಥೆಯ ಕೇಳಿರಿ

ಕಂಡದ್ದು ಬಂಗಾರ ಕಾಣದ್ದು ಶೃಂಗಾರ
ಭೂತಪ್ಪನರಮನೆ ಐಭೋಗ ನೋಡಲು
ಕಣ್ಣೆರಡು ಸಾಲದೆ ಹೋದಾವು

ಅಲೆಯುವ ಹೊಲೆಯರ ಹೊಲೆಯುವ ಮಾದಿಗರ
ಮಲಗಿದ ಜನಕೆಲ್ಲ ಗುರುಕಾಣೊ ಭೂತಪ್ಪ
ಬಡವರ ಬಾಳಿಗೆ ಶಿವಕಾಣೊ

ಕತ್ತಲೆ ಮುಖದೋನು ಕೆಂಡದ ಕಣ್ಣೋನು
ಮುಗಿಲಿನ ಉದ್ದ ಈ ಸ್ವಾಮಿ ಇದ್ದ
ಭೂತಪ್ಪ ನಕ್ಕರೆ ಬೆಳಗಾದೊ

ಹಂದಿಯ ಕಡಿಬೇಕು ಕೋಳಿಯ ಕೊಯ್ಯಬೇಕು
ಕುರಿಕೋಣನಾ ಬಲಿಯ ಕೊಡಬೇಕು ಜಾತ್ರೆಗೆ
ಇರುವೆಯ ಸಾಲಂತೆ ಜನಬಂದೊ

ಏಳೂರ ದೇವರ ಆಳುವ ಆಸೆಯು
ಬಂತಲ್ಲ ಭೂತವು ಮನಸೀಗೆ ಬಿತ್ತಲ್ಲ
ಇಂದ್ರನ ಪಟ್ಟವು ಕಣ್ಣೀಗೆ

ತೆಂಗಿನ ಮರದುದ್ದ ಅನ್ನವ ಉಣ್ಣುವೆ
ಕೋಡೀರಯ್ಯೊ ಉಳ್ಳ ದೇವರು ನನಗೆ
ಕಾಯುವೆ ನಿಮ್ಮ ಬಾಗಿಲು

ತೆಂಗಿನ ಮರದುದ್ದ ಅನ್ನವ ಕೊಟ್ಟರೆ
ಆಗುವೆ ಕಾಲಾಳು ಕಯ್ಯಾಳು ನಿಮ್ಮ
ಪಾದದ ಧೂಳ ತಲೆಗಿಟ್ಟು

ಅನ್ನದ ದಾಹವ ಇಂಗಿಸಲಾರದ
ದೇವರು ಹಂಗಿಗೆ ಒಳಗಾಗಿ ಬಾಳಲಿ
ನನ್ನಯ ಕಾಲಿಗೆ ಕಸವಾಗಿ

ಊರೂರ ದೇವರು ಅನ್ನವ ತಂದವು
ತೆಂಗಿನ ಮರದುದ್ದ ಬರಲಿಲ್ಲ ದೇವರು
ಭೂತಪ್ಪನರಮನೆ ಆಳಾದೊ

ಉಳ್ಳಂಥ ದೇವರು ಹಳ್ಳಕೆ ಬಿದ್ದವು
ಭೂತಪ್ಪ ಬೆಟ್ಟದ ಮೇಲೇರಿ ಮೆರೆದನು
ಈ ದೇವರೆದುರು ಯಾರಯ್ಯ

ಭೂತಪ್ಪನೆದುರು ಯಾರಯ್ಯ ಎಂದರೆ
ಅಂಜದ ದೇವರು ಘನಮಂಜುನಾಥ
ಅನ್ನದ ಪಣಕೆ ಇಳಿದಾನು

ತೆಂಗಿನ ಮರದುದ್ದ ಅನ್ನವ ಕೊಡುವೆನು
ನನ್ನಯ ಹಂಗಿಗೆ ಒಳಗಾಗೊ ಭೂತ
ನೀನಿಂದು ನನಗೆ ಶರಣಾಗೊ

ಎಲೆಮಂಜ ಎಂದು ಪಕಪಕ ನಕ್ಕನು
ತಕತಕ ಕುಣಿದು ಭೂತಪ್ಪ ಅಂದನು
ನಕ್ಸಾರ ಬ್ಯಾಡೊ ಮಂಜಪ್ಪ

ಆಳನು ಕರೆಸಿದ ಘನಮಂಜುನಾಥ
ತೆಂಗಿನ ಮರವೊಂದ ಕಡಿಸೀದ ದೇವರು
ಮರವನು ಉದ್ದಕೆ ಮಲಗೀಸಿ

ಅನ್ನದ ಮಡಕೆಯ ತಂದನು ದೇವರು
ಒಂದೊಂದು ಅಗುಳೆ ಇಟ್ಟಾನು ಅನ್ನ
ತೆಂಗಿನ ಮರದುದ್ದ ಆಯ್ತಲ್ಲೊ

ತೆಂಗಿನ ಮರದುದ್ದ ಅನ್ನವ ಉಣ್ಣಯ್ಯ
ಹಸಿವನು ನೀಗೊ ಭೂತಪ್ಪ ನೀನು
ನನ್ನರಮನೆಯ ಕಾಯಪ್ಪ

ಘನಮಂಜುನಾಥನ ಆಳಾದ ಭೂತಪ್ಪ
ಭೂತಪ್ಪನೊಡನೆ ಜನರೆಲ್ಲ ಶರಣಾಗಿ
ಜಯಮಂಜುನಾಥ ಎಂದರು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು