You are hereಬೆಂಜಮಿನ್ ಮೊಲಾಯಿಸ್

ಬೆಂಜಮಿನ್ ಮೊಲಾಯಿಸ್


ನೆಲದಾಳದ ಚಿನ್ನದ ಅದಿರು
ತೋಟಗಳ ಹಣ್ಣುಹಂಪಲು ಮಾತ್ರ ಗೊತ್ತಿದ್ದ
ಬಿಳಿಯ ದೊರೆ ಇಂದು ನಿದ್ದೆಗೇಡಿ
ಅವನ ಅರಮನೆಯ ಸುತ್ತ ಬೆಳೆಯುತ್ತಿರುವ
ಧಿಕ್ಕಾರದ ಹೊಸ ಬೆಳೆಯನ್ನು
ಉಣ್ಣಲಾರದ ಉಪವಾಸಿ
ತನ್ನ ಜಾತಿಯೇ ಪರಮಾಪ್ತನೆಂದು ತಿಳಿದೆ
ಬಿಳಿಯರಸ ಜನಕೋಟಿಯ ಮೆರವಣಿಗೆ ಎದುರಲ್ಲಿ ಒಬ್ಬಂಟಿ
ಆಫ್ರಿಕಾದ ಕತ್ತಲಲ್ಲಿ ಮಂಕಾಗಿ ಮಿನುಗುತ್ತಿದ್ದ ಕ್ರಾಂತಿ ಹಣತೆ
ಇದ್ದಕ್ಕಿದ್ದಂತೆ ಹತ್ತೂ ದಿಕ್ಕುಗಳನ್ನು ಬೆಳಗಿತು
ಮಾಯಾವಿ ಮಾಂಡೆಲಾ ಎಣ್ಣೆಯಾಗಿದ್ದ
ಬೆಂಜಮಿನ್ ಮೊಲಾಯಿಸ್ ಬತ್ತಿಯಾಗಿದ್ದ

ಸಾವಿನ ಕುಣಿಕೆ ಬೆಂಜಮಿನ್ನನ ಕೊರಳ ತಬ್ಬಿತ್ತು
ಸಾವು ಬಿಳಿಯರ ಸಾಮ್ರಾಜ್ಯಕ್ಕೊದಗಿ ಬಂದಿತ್ತು
ಬೂಟುಗಾಲಿನ ಒದೆತಕ್ಕೆ ಹುಚ್ಚುನಾಯಿಯ ಕಡಿತಕ್ಕೆ
ಬಣ್ಣಬಂದೂಕುಗಳ ಕುರುಡು ಆಳ್ವಿಕೆಗೆ
ರಕ್ತದುತ್ತರ ಕೊಟ್ಟವನೆ
ನೇಣುಗಂಬಕ್ಕಂಜದವನೆ
ಬೆಂಜಮಿನ್ ಮೊಲಾಯಿಸ್
ವ್ಯರ್ಥವಲ್ಲ ನಿನ್ನ ಬಲಿದಾನ

ಹೆಬ್ಬಂಡೆಯಡಿಯಲಿ ಹಸಿರು ಚಿಗುರಿ
ಹುಲ್ಲುಗಾವಲ ರೂಪ ತಾಳುವುದು
ಹೆತ್ತ ಕರುಳಿನ ಅಳಲ ತೊರೆ
ವರ್ಣಭೇದವ ಕೊಚ್ಚಿ ಎಸೆಯುವುದು
ಕಪ್ಪು ಹೃದಯದ ಬೆಳ್ಳಿ ಬೆಳಕು
ಬಿಳಿಯೆದೆಯ ಕತ್ತಲನು ಅಳಿಸಿ ಹಾಕುವುದು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು