You are hereಬೆಂಗಳೂರಿನ ಹಾಡು
ಬೆಂಗಳೂರಿನ ಹಾಡು
ಬೆಂಗಳೂರೇ ಎಂದು ಬಾಯಾರೆ ಕರೆಯೋರೆ
ಮೈತುಂಬ ವಡವೆಗಳು ಇರಬಹುದು ನನಗೆ
ನನ್ನ ಮೇಲಿರಬಹುದು ಎಲ್ಲ ಚೆಲುವರ ಕಣ್ಣು
ರಥ ಕುದುರೆ ಕಾಲಾಳು ಆನೆಗಳು ಸುತ್ತ
ನಮ್ಮ ಮದುವೆಗೆ ಮೊದಲು ಗಂಡ ಕೆಂಪೇಗೌಡ
ಹಾರುವರ ಹಟ್ಟಿಯಲಿ ಜೀತಕಿದ್ದ
ಚಿಂದಿ ದುಬಟಿಯ ಚೆಲುವೆ ತಂಗಳಿನ ಸರದಾರ
ದನದ ಕೊಟ್ಟಿಗೆಯಲ್ಲಿ ಮಲಗುತ್ತಿದ್ದ
ಏಳು ಲೋಕದ ನೋವು ಮೂಡುವಾಗೆದ್ದವನು
ದುಡಿಯುತ್ತಿದ್ದನು ಹೊತ್ತು ಇಳಿವತನಕ
ಹಿಪ್ಪನೇರಳೆ ಕಡ್ಡಿ ಹಣ್ಣು ತರಕಾರಿಗಳು
ಮಲ್ಲಿಗೆಯು ಕಿಕ್ಕಿರಿದು ಬೆಳೆವತನಕ
ಅಪ್ಪಣೆಯ ಕೊಟ್ಟ ಧಣಿ ಮೇಲುತೋಟವನೆಲ್ಲ
ಅಗೆದುಬಿಡು ನಾಬರುವ ವೇಳೆಯೊಳಗೆ
ಯಾವ ಕೀಲಿನ ನೋವೊ ಎಂಥ ಮಾಯೆಯ ಮರೆವೊ
ನನಗಂಡ ತೋಟದಲಿ ಮಲಗಿಬಿಟ್ಟ
ಗಿಡಗಿಡವು ಹಾವಾಗಿ ನಾಗಲೋಕವು ಹುಟ್ಟಿ
ಬೇಲಿಗಳ ಮೇಲೆಲ್ಲ ಮಾಣಿಕ್ಯ ಚೆಲ್ಲಿ
ಏಳೆಡೆಯ ನಾಗರವು ನಿಂತು ನಾಂಟೀವಾಡಿ
ಮಲಗಿದ್ದ ಪತಿರಾಯ ಬೆಳಗುತಿದ್ದ
ಹತ್ತುದಿಕ್ಕುಗಳಲ್ಲಿ ಮುತ್ತುರತ್ನದ ದೀಪ
ಕಂಡ ಹಾರುವ ಹರಿದ ಬೆವರ ತೊರೆಯಾಗಿ
ಎಂಥ ಪುಣ್ಯವೊ ನಿನದು ಯಾವ ತಾಯಿಯ ಮಗನೊ
ನಾಗಪ್ಪ ಬಂದವನೆ ಕೆಂಪಯ್ಯ ಏಳೊ
ರಾಜ್ಯವಾಳುವ ಯೋಗ ನಿನಗುಂಟು ಕೆಂಪಣ್ಣ
ಎದ್ದು ನಿಲ್ಲೋ ರಾಜ ಕಟ್ಟಯ್ಯ ದಂಡು
ನೀನರಸನಾದಾಗ ನನ್ನ ಮಂತ್ರಿಯ ಮಾಡೊ
ಮುತ್ತಿಗೆಯ ಹಾಕಯ್ಯ ಕೊಳ್ಳಯ್ಯ ಕತ್ತಿ
ಸತ್ತ ಮಕ್ಕಳು ಎಷ್ಟು ಆದ ಮುಂಡೆಯರೆಷ್ಟು
ಎಷ್ಟಯ್ಯ ಕನಸೊಡೆದು ಹರಿದ ರಕ್ತ
ಮುರಿದ ಕೈ ಕಾಲುಗಳು ಮುರಿದ ತೊಲೆ ಕಂಬಗಳು
ಒಡೆದ ಹೊಂಗಳಸಗಳ ಲೆಕ್ಕವೆಷ್ಟು
ನನ್ನ ಗಂಡನ ಜೊತೆಯ ಜೀತಗಾರರ ಕಥೆಯು
ಯಾವ ಹಾಡಿನ ಒಳಗೂ ಮೂಡಲಿಲ್ಲ
ರಾಜ್ಯದಾಹದ ಬೆಂಕಿ ಊರೂರ ಸುಟ್ಟಾಗ
ಬೂದಿಯಾದರೊ ಅವರು ತಿಳಿಯಲಿಲ್ಲ
ನನ್ನ ಸೀರೆಯ ಸೆರಗು ಮರೆಮಾಡಿಕೊಂಡಿರುವ
ಜೋಪಡಿಯ ಲೋಕವನು ತೋರಲೇನು
ಹೊಟ್ಟೆಯೊಳಗಿನ ಬೆಂಕಿಯುಂಡೆಯೆಲ್ಲವನೆತ್ತಿ
ಮೆರೆವ ಜನಗಳ ಮೇಲೆ ಚೆಲ್ಲಲೇನು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page