You are hereಬೀಳು
ಬೀಳು
ಎಣ್ಣೆ ಕಾಣದ ತಲೆಯ ಕೂದಲುಗಳೆದ್ದೆದ್ದು
ನರ್ತನವ ಗೈಯುತಿರೆ ಮೋದದಿಂದ
ಬರಿಹೊಟ್ಟೆ ಕೊರಗಿತ್ತು ಕೊಳೆಬಟ್ಟೆ ಹರಿದಿತ್ತು
ಪ್ರೇತಕಳೆ ಚಿಮ್ಮಿತ್ತು ವದನದಿಂದ
ಹರಿದಸೀರೆಯ ಅಂಚು ಸುಳಿವ ಗಾಳಿಗೆ ಹಾರಿ
ಅಡಗಿದ್ದ ತೊಡೆಗಳನು ತೋರುತಿತ್ತು
ಚಿಂದಿ ಕುಬುಸವು ತನ್ನ ಒಲವು ಬಂದೆಡೆ ತೂರಿ
ವಕ್ಷಗಳ ದರ್ಶನವ ಮಾಡಿಸಿತ್ತು
ಅನ್ನವಿಲ್ಲದ ಹೆಣ್ಗೆ ಕುಂಕುಮವು ಕಡುಗೇಡು
ಹಣೆಯಲ್ಲಿ ಬೆವರಹನಿ ಮಿನುಗುತಿತ್ತು
ಉಟ್ಟ ಸೀರೆಯ ಸೆರಗು ಎತ್ತೆತ್ತಲೋ ಏರಿ
ಬಡತನದ ಬಾವುಟವು ಹಾರುತಿತ್ತು
ಕಾಲ್ಗೆ ಮೆಟ್ಟುಗಳಿಲ್ಲ ಕೈಗಳಿಗೆ ಬಳೆಯಿಲ್ಲ
ಮೈಯೆಲ್ಲ ಬೆವರೆದ್ದು ನಾರುತಿತ್ತು
ಬವಣೆಯಲಿ ಬೆಂದತನು ಕೊಳೆಯ ಗೆಳೆತನ ಮಾಡಿ
ಮೂಳೆಯುಳಿದಿವೆ ಎಂದು ಸಾರುತಿತ್ತು
ಕಗ್ಗೋಳು ಕೊನೆಗೊಂಡು ಬಾಳಿಗೊಳಿತೊದಗುವುದು
ಎಂಬಾಸೆ ಕಣ್ಣಿನಲಿ ಮಾಗುತಿತ್ತು
ಉಮ್ಮಳವನದುಮಿಟ್ಟ ನೀರಿಲ್ಲದಾ ನೋಟ
ಬಾಳುವೆಗೆ ಧಿಕ್ಕಾರ ಎನ್ನುತಿತ್ತು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page