You are hereಬಿದ್ದಾವು ಮನೆಗಳು

ಬಿದ್ದಾವು ಮನೆಗಳು


ಬಿದ್ದಾವು ಮನೆಗಳು ಬಿದ್ದಾವು ಹೆಣಗಳು
ಬಿದ್ದಾವು ತೆಂಗಿನ ಗರಿಗಳು ಅಣ್ಣಯ್ಯ
ಬಡವರ ಸಾವು ಆಯ್ತಲ್ಲೊ

ಗುಡಿಸಲು ಬೀಳುವಾಗ ಬಂಗಲೆಗಳು ನಗುತಿದ್ದೊ
ನಮ್ಮೂರ ಮೋರಿ ಹೆಣತುಂಬಿ ಹರಿಯಿತು
ರಕ್ತದ ಕೋಡಿ ಊರೆಲ್ಲ

ಮಕ್ಕಳು ಮರಿಗಳು ಬಸರೀರು ಬಾಣಂತೀರು
ಇಲಿಗಳ ರೀತಿ ಚೆಲ್ಲಾಡಿ ಹೋದರು
ಬಡವರ ಬಂಧುಗಳೆಲ್ಲವರೊ

ಮಡಕೇಗೆ ಕುಡಿಕೇಗೆ ಮನುಷರು ಸಮನಾಗಿ
ಬೀದಿಗೆ ಬಂದು ಬಿದ್ವಲ್ಲೊ ಈವತ್ತು
ಮಣ್ಣಿನ ಕಣವಾಗಿ ಹೋದ್ವಲ್ಲೊ

ಬಡವರ ಹೆಸರೇಳಿ ಪಟ್ಟಕೆ ಬಂದೋರು
ಬಡವರ ಚಟ್ಟವ ಕಟ್ಟಿಸಿ ಮಣ್ಮಾಡಿ
ಗುಡಿಸಲುಗುಡಿಸಲುಗಳ ನುಂಗಿ ನಗುತಾರಲ್ಲೊ

ತುಳಿಯುವ ಜನರನ್ನು ಸುಮ್ಮನೆ ಬಿಡಲಾರೊ
ಮನೆಮನೆ ಮುಂದಲ ಗಿಡದಲ್ಲಿ ನಾವೆಲ್ಲ
ಬರುತೀವಿ ಕೆಂಪನೆ ಹೂವಾಗಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು