You are hereಬಂದಿರುವರು ಹುಲಿಗಳಾಗಿ
ಬಂದಿರುವರು ಹುಲಿಗಳಾಗಿ
ಒಪ್ಪೊತ್ತಿನ ತುತ್ತಿಗಾಗಿ ತತ್ತರಿಸುವ ಮೈಗಳನ್ನು
ಸುಪ್ಪತ್ತಿಗೆ ಮಾಡಿ ಮೆರೆವ ದರಬಾರಿನ ಧೀರರೆ
ಘೋರ ಹೆರಿಗೆ ನೋವುಗಳಿಗೆ ಬಂಗಾರದ ಭರವಸೆಗಳ
ಕೊಟ್ಟು ಕಾಲನೂಕುವಂಥ ಅಧಿಕಾರದ ಮಿಂಡರೆ
ಬಡಜನಗಳ ಗುಂಡಿಗೆಗಳ ಇಟ್ಟಿಗೆಗಳ ಗಟ್ಟಿಮಾಡಿ
ಸೌಧಗಳನ್ನು ಕಟ್ಟುವಂಥ ಚುನಾವಾಣೆಯ ವೀರರೆ
ಇತಿಹಾಸದ ಕತ್ತಲೆಯಲಿ ಕಾಣದಾದ ಸತ್ಯಗಳನ್ನು
ಸುಟ್ಟು ಬೂದಿ ಮಾಡುವಂಥ ಸತ್ಯ ಹರಿಶ್ಚಂದ್ರರೆ
ಭಾಷಣಗಳ ಬಡಿಸಿದಿರಿ ಘೋಷಣೆಗಳ ಕುಡಿಸಿದಿರಿ
ಸಂಕಟಗಳ ಕಂಪನಕ್ಕೆ ಕೊನೆಯಿಲ್ಲವೆ ಹೇಳಿರಿ
ನಿಮ್ಮ ಬೇಟೆಯುತ್ಸವದಲಿ ಕುರಿಗಳಾಗಿ ಸತ್ತ ಜನರು
ಬಂದಿರುವರು ಹುಲಿಗಳಾಗಿ ಗರ್ಜನೆಯನು ಕೇಳಿರಿ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page