You are hereಪ್ರೀತಿ ಮತ್ತು ಜ್ಯೋತಿಷ್ಯ

ಪ್ರೀತಿ ಮತ್ತು ಜ್ಯೋತಿಷ್ಯ


ಊರೂರ ತೇರಿಗೆ ಹಣ್ಣುದವನವ ಎಸೆದು
ಜೀವ ಕೊಟ್ಟರು ಎಲ್ಲ ಜಾತ್ರೆಗಳಿಗೆ
ಹುಣ್ಣಿಮೆಯ ಹಿಡಿದಿಟ್ಟು ಪ್ರೀತಿ ಪದಕವ ಮಾಡಿ
ಬೆಳಕ ತಂದರು ಕತ್ತಲಾಳಗಳಿಗೆ

ವಧುವ ಕೇಳಲು ಬಂದ ವರನ ಶಾಪವು ತಟ್ಟಿ
ಬಂಡೆಗಲ್ಲಿಗೆ ಹಡಗು ಢಿಕ್ಕಿಯೊಡೆದು
ಕಣ್ಣೀರ ಚೆಲ್ಲುತ್ತ ಜಾತಿಗಳ ಜರೆದರು
ದಿಕ್ಕೆಟ್ಟ ಹಕ್ಕಿಗಳು ಮೊರೆಯುವಂತೆ

ಆಪತ್ತು ಬಂದವಗೆ ಜ್ಯೋತಿಷಿಯೆ ಕಡುನೆಂಟ
ಅಲೆದು ಕಂಡನು ತರುಣ ಜ್ಯೋತಿಷಿಯನು
'ಒಲಿದ ಹೆಣ್ಣಿನ ಜೊತೆಗೆ ಹೋಗು ಯೋಜನದೂರ
ಅರಗಳಿಗೆ ನಿಲ್ಲದಿರು ಈ ಊರಿನಲ್ಲಿ'

ಬಿರುಗಾಳಿಯಂತವರು ಬಿರಬಿರನೆ ನಡೆದರು
ಬಿಟ್ಟ ಬಾಣದ ರೀತಿ ದಿಕ್ಕುಗಳ ಬಗೆದರು
ಏಳು ಬೆಟ್ಟವ ದಾಟಿ ಮೋಡಗಳ ಸೀಳಿ
ತಾರೆಗಳ ಗೊಂಚಲನು ಮಿನುಗಿಸುತ್ತ

ಇತ್ತ, ಹೊತ್ತಾಯಿತೆನ್ನುತ ಚಿಲ್ಲರೆ ಸದ್ದಿನಲಿ
ಜ್ಯೋತಿಷಿಯು ಜೋರಾಗಿ ಮನೆಗೆ ಬಂದ
'ಒಲಿವ ಹಂಬಲಿಸಿ ಹೋದವಳ ಮರೆತು ಬಿಡಿ'
ಎಂಬ ಮುದ್ದಿನ ಮಗಳ ಪತ್ರ ಕಂಡ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು