You are hereಪುರುಷಾರ್ಥ
ಪುರುಷಾರ್ಥ
ಮನೆಯ ಸೂರಿನ ಮೇಲೆ ಕುಂತಿರುವ ಹಿರಿಯರು
ಪ್ರೇಮದುರಿಯಲಿ ಬೆಂದು ಬಳಲಿದವರು
ತುಂಬು ಎದೆ, ಕೆಂಪು ತುಟಿ, ಕಣ್ಣ ಬೆಳಕಿನ ತುಂಬ
ಬಾಳಿನರ್ಥವ ಕಂಡು ಮಿಂಚಿದವರು
ಎಲ್ಲೆಂದರಲ್ಲಲ್ಲಿ ಬೆಳೆಸಿ ಮಲ್ಲಿಗೆ ಬಳ್ಳಿ
ಕಂಡ ಕಮಲಗಳನ್ನು ಕಾಡಿದವರು
ತುಟಿಯು ಹತ್ತಿರವಾಗಿ ಪ್ರೀತಿ ಎತ್ತರವಾಗಿ
ಮುಗಿಲ ನಾಚಿಸಿ ನೀರ ಹರಿಸಿದವರು
ಹಗಲು ರಾತ್ರಿಯ ಕುಣಿತ ಹರಿವ ನದಿಗಳ ಮೊರೆತ
ಕುದುರೆಗಳ ಕೆನೆತದಲಿ ಚಂದವಿತ್ತು
ಪುಟ್ಟ ಗುಡಿಸಲಿನಲ್ಲಿ ಮೈಮಾರಿಕೊಳುತಿರುವ
ಹೆಣ್ಣ ಸಂಕಟದಲ್ಲಿ ಅಳವಿತ್ತು
ದೇವರೆದುರಲಿ ದೇಹ ದಾಹವನು ಇಂಗಿಸಿದ
ದೇವದಾಸಿಯ ಮಕ್ಕಳೇನಾದರು
ದೇವರನು ಧಿಕ್ಕರಿಸಿ ಮಾನವತೆಯನು ನಂಬಿ
ಉಳ್ಳವರ ಎದೆಗವರು ಮುಳ್ಳಾದರು
ಬೆತ್ತಲೆಯ ರಾಜ್ಯದಲಿ ರಾಜರಾಣಿಯರಾಗಿ
ಮಾಡಿದರು ಗಂಧರ್ವ ಕಾರುಬಾರು
ಬಿಸಿಯ ಅಪ್ಪುಗೆಯಲ್ಲಿ ಮಲಗಿರುವ ಕೋಮಲೆಗೆ
ಜಾತಿಮತಗಳ ನೆನಪು ಇಲ್ಲ ಚೂರು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page