You are hereಪಂಚನದಿಗಳ ಹಾಡು
ಪಂಚನದಿಗಳ ಹಾಡು
ಕಂಬನಿಯ ಕಾಲುವೆಯು ಹರಿಯುತ್ತಲಿಹುದೇಕೆ
ಪಂಚ ನದಿಗಳು ಹರಿವ ನಾಡಿನಲ್ಲಿ
ಮನಮನದ ಒಳಗೆಲ್ಲ ದಟ್ಟಹೊಗೆ ನಿಟ್ಟುಸಿರು
ಕೂಗಿ ಕುಣಿಯುವ ಸಾವು ಕೊನೆಯಾಗದೆ
ಜಾತಿಮತಗಳ ಹುಚ್ಚು ಕಾಳಸರ್ಪಗಳಾಗಿ
ಕಂದಮ್ಮಗಳ ಕಣ್ಣು ಕುಕ್ಕುತಿಹವು
ಗೋಧಿಯನು ಬೆಳೆವಲ್ಲಿ ಕೋವಿಗಳ ಬೆಳೆಯಾಗಿ
ಮುಗ್ಧರೆದೆಗಳು ಚೂರುಚೂರಾದವು
ಹಕ್ಕಿಗಳು ಚುಕ್ಕೆಗಳು ಮುಗಿಲ ಸಾಲಿನ ಬದಲು
ಕತ್ತು ಹಿಸುಕುವ ಕಯ್ಯಿ ಬಾನಿನಲ್ಲಿ
ಹೂ ಹೆಣ್ಣು ಹೆಜ್ಜೇನು ಗೆಜ್ಜೆಗಳ ದನಿಯಿಲ್ಲ
ಒಡಲ ಸೀಳುವ ಬೆಂಕಿ ಭೂಮಿಯಲ್ಲಿ
ಬಯಲೊಳಗೆ ಬನದೊಳಗೆ ಸುಡುವ ಬಂಡೆಯ ಮೇಲೆ
ಭೋರೆಂದು ವಿಷಗಾಳಿ ಬೀಸುತಿಹುದು
ನದಿಕೊಳ್ಳ ಹೊಳೆಹಳ್ಳ ಕಡಲ ನೀರುಗಳಲ್ಲಿ
ಅಣ್ಣತಮ್ಮರ ರಕ್ತ ಸೇರುತಿಹುದು
ಪ್ರಾಣಮಿತ್ರರು ಕೂಡ ಗುರುತು ಸಿಕ್ಕದ ಹಾಗೆ
ಕತ್ತಲೆಯು ಬಲೆ ಬೀಸಿ ಕುಣಿಯುತಿಹುದು
ಸಮತೆ ಸೋದರ ಭಾವ ಮಮತೆ ಪ್ರೀತಿಯ ಬೆಳಗಿ
ತಣಿಸಿದ್ದ ಹೊಂಬೆಳಕು ಏನಾಯಿತೊ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page