You are hereನಿನ್ನ ಮಗನ ಕೊಂದರು
ನಿನ್ನ ಮಗನ ಕೊಂದರು
ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು
ಅವನಂಥ ಮೈಕೈಗಳು ಕಟ್ಟಿದಂಥ ಗ್ವಾಡೆ ತಾವು
ಬಿಸಿಲೇರದ ಬೆಳಗಿನಲ್ಲಿ ನಿನ್ನ ಮಗನ ಕೊಂದರು
ಬೆವರ ಬಸಿದ ಅವನ ಎದೆಗೆ ಗುರಿಯಿಟ್ತರು
ಗುಂಡಿಕ್ಕಿದರು
ಗುಂಡೊಂದೂ ಕಾಣಲಿಲ್ಲ ಕೊಲೆಗಡುಕರ ಕೆಲಸವೆಲ್ಲ
ಸತ್ತ ಮಗನ ಕಣ್ಣಿನಲ್ಲಿ ಮಿಂಚು ಮಾಯವಾಯಿತು
ಹೊರಗಿನವರು ಕೊಲ್ಲಲಿಲ್ಲ ಎಲ್ಲ ಇವನ ಬಂಧುಬಳಗ
ನೆರೆಹೊರೆಯವರು
ಸುತ್ತಿದಂಥ ಸರಪಳಿಯಲಿ ಧರಧರಧರ ಎಳೆಯುವಾಗ
ಕ್ರಾಂತಿವೀರರೆಲ್ಲ ಬಂದು ಮುತ್ತಿಕೊಂಡರು
ಗಿಟುಕಾಸಿದ ಗಿರಣಿಗಳು ಚಿಮಣಿ ಹೊತ್ತು ನಿಂತಿದ್ದೊ
ಅವನ ಕಾಲ ಮಿಂಚಿತ್ತು ಹೊಳೆಯಿತೇನೊ ಮನಸಿಗೆ
ಶೂನ್ಯವಾದ ಗಿರಣಿಗಳಲಿ ದಿನದಿನಕೂ ಬೆಳೆಯುವಂಥ
ಬೆಟ್ಟದಂಥ ಶಕ್ತಿಯೊಂದು ಕಂಡಿತವನ ಕಣ್ಣಿಗೆ
ತೊಟ್ಟಿಕ್ಕಿತು ಕಣ್ಣಿರು ಹೋದನವನು ಮಣ್ಣಿಗೆ
ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page