ಅನಾದಿಯಿಂದ ಅನಂತದವರೆಗೆ-ಹಾಕಿಂಗ್‌ರ ಹದ್ದುನೋಟ
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ಸ್ಟೀಫನ್ ಹಾಕಿಂಗ್‌ರ ಹೆಸರು ಭೌತವಿಜ್ಞಾನದಲ್ಲಿ ಕಳೆದ ಎರಡು ದಶಕಗಳಿಂದ ಅಗ್ರಶ್ರೇಣಿಯಲ್ಲಿದೆ. ಅವರು ತಮ್ಮ ಶೋಧನೆಗಳಿಂದ ವಿಶ್ವದ ಬಗ್ಗೆ ನಮ್ಮ ದೃಷ್ಟಿಯನ್ನೇ ಬದಲಾಯಿಸಿದ್ದಾರೆ. ಅವರ "ಕಾಲದ ಸಂಕ್ಷಿಪ್ತ ಚರಿತ್ರೆ" (A Brief History of Time) ವಿಜ್ಞಾನಿಗಳಲ್ಲದ ಸಾಮಾನ್ಯರಿಗೆ ವಿಶ್ವದ ಬಗೆಗಿನ ವಿವಿಧ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಒಂದು ಅದ್ಭುತವಾದ ಒಳನೋಟವನ್ನು ಒದಗಿಸುತ್ತದೆ. ಮಾನವ, ವಿಶ್ವ ಮತ್ತು ದೇವರು-ಅಂಥವನೊಬ್ಬ ಇದ್ದರೆ- ಈ ಮೂವರ ಪರಸ್ಪರ ಸಂಬಂಧಗಳನ್ನು ತಿಳಿಯುವ ಪ್ರಯತ್ನವೂ ಅವರ ಚರ್ಚೆಯಲ್ಲಿ ಅಡಗಿದೆ.
ಮಾತಾಡಲು, ಬರೆಯಲು ಅಥವಾ ಓಡಾಡಲು ಸಹ ಬಾರದ, ಒಂದು ದಾರುಣ ಕಾಯಿಲೇಗೀಡಾದ (Amyotrophic Lateral Sclerosis) ಹಾಕಿಂಗರ ಮೆದುಳು ಐನ್‌ಸ್ವೀನ್ ನಂತರದ ಒಂದು ಅದ್ಭುತವೆಂದು ಪರಿಗಣಿಸಲಾಗಿದೆ. ಅಂತರ್ರಾಷ್ಟ್ರೀಯ ಖ್ಯಾತಿಯನ್ನು ಪಡೆದ ಅವರ ’ಕಾಲದ ಸಂಕ್ಷಿಪ್ತ ಚರಿತ್ರೆ’ಯ ಸಾರಾಂಶವನ್ನು ಈ ಲೇಖನದಲ್ಲಿ ಸಂಗ್ರಹಿಸಲಾಗಿದೆ.
ನಾವು ಒಂದು ವಿಸ್ಮಯಕರವಾದ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಸುತ್ತಲಿನ ವಿಶ್ವ ಎಂಥಹುದು? ಅದರಲ್ಲಿ ನಮ್ಮ ಸ್ಥಾನವೇನು? ವಿಶ್ವ ಎಲ್ಲಿಂದ ಬಂತು ಮತ್ತು ನಾವು ಹೇಗೆ ಬಂದೆವು? ವಿಶ್ವ ಈಗಿರುವ ರೀತಿಯಲ್ಲಿ ಏಕಿದೆ? ಪ್ರಾಚೀನ ತತ್ವಜ್ಞಾನಿಗಳಿಂದ ಹಿಡಿದು ಆಧುನಿಕ ವಿಜ್ಞಾನಿ ಗಳವರೆಗೆ ಎಲ್ಲರನ್ನು ಕಾಡಿಸುತ್ತಿರುವ ಪ್ರಶ್ನೆಗಳು ಇವು. ಕಾಲದಿಂದ ಕಾಲಕ್ಕೆ ಮಾನವನ ಜ್ಞಾನ ವಿಕಾಸವಾದಂತೆಲ್ಲಾ ಈ ಪ್ರಶ್ನೆಗಳಿಗೆ ಉತ್ತರಗಳೂ ಬದಲಾಗುತ್ತಾ ಬಂದಿವೆ. ಸ್ಟೀಫನ್ ಹಾಕಿಂಗರು ಇಂತಹ ಅನೇಕ ಪ್ರಶ್ನೆಗಳಿಗೆ ಸಾಮಾನ್ಯರ ಭಾಷೆಯಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ.
ಆಮೆಯ ಬೆನ್ನಮೇಲೆ ಚಪ್ಪಟೆಯಾದ ಭೂಮಿ ನಿಂತಿದೆ ಎಂಬುದು ಒಂದು ಪ್ರಾಚೀನ ನಂಬಿಕೆಯಾಗಿತ್ತು. ಅಗೋಚರವಾದ ತಂತಿಗಳ ತುದಿಯಿಂದ ಭೂಮಿ ತೂಗಾಡುತ್ತಿದೆ ಎಂಬುದು ಇನ್ನೊಂದು ವಾದ. ಮೊದಲನೆಯದಕ್ಕಿಂತ ಎರಡನೆಯದು ಗಣಿತಶಾಸ್ತ್ರದ ವ್ಯಾಪ್ತಿಯೊಳಗೆ ಬರಬಹುದಾದರೂ ಎರಡಕ್ಕೂ ವೈಜ್ಞಾನಿಕ ಆಧಾರಗಳಲ್ಲ. ಯಾರೊಬ್ಬರೂ ಆ ದೈತ್ಯ ಆಮೆಯನ್ನಾಗಲಿ, ಅಗೋಚರ ಬಲಿಷ್ಠ ತಂತಿಗಳನ್ನಾಗಲಿ ನೋಡಿಲ್ಲ. ಆಮೆಯ ವಾದದ ಪ್ರಕಾರ ಭೂಮಿ ಚಪ್ಪಟೆಯಾಗಿದ್ದುದಾದರೆ ಅದರ ತುದಿಗಳಿಂದ ಮನುಷ್ಯರು ಕೆಳಗೆ ಬೀಳಬೇಕಾಗಿತ್ತು. ಆದರೆ ಯಾರು ಹಾಗೆ ಬಿದ್ದಿಲ್ಲ. ಬರ್ಮುಡಾ ತ್ರಿಕೋಣದ ಬಳಿ ಅದೃಶ್ಯವಾದುವು ಎಂದು ಹೇಳಲಾದ ಹಡಗುಗಳ ಕಥೆಯನ್ನು ಅಂತಹ ಸಮರ್ಥನೆಗೆ ನೀಡುವುದಾದರೆ ಅದು ಬೇರೆ ಮಾತಾಯಿತು ಎಂದು ಹಾಕಿಂಗ್ ಹಾಸ್ಯ ಮಾಡುತ್ತಾರೆ.
ಪ್ರಾರಂಭದ ವಾದಗಳ ಪ್ರಕಾರ ವಿಶ್ವದ ಮೇಲಿನ ಘಟನಾವಳಿಗಳು ಮಾನವ ಭಾವನೆಗಳನ್ನು ಹೊಂದಿದ್ದ ದೇವತೆಗಳಿಂದ ನಿಯಂತ್ರಿತವಾಗಿದ್ದುವು. ಅವರು ಮಾನವ ಸಹಜ ರೀತಿಯಲ್ಲಿ ವರ್ತಿಸುತ್ತಿದ್ದರು. ಆ ದೇವತೆಗಳು ನದಿ ಬೆಟ್ಟಗಳಲ್ಲಿ, ಸೂರ್ಯಚಂದ್ರರಲ್ಲಿ ನೆಲಸಿದ್ದರು. ಮಳೆಬೆಳೆಗಳಿಗಾಗಿ, ಭೂಮಿಯ ಸಮೃದ್ಧಿಗಾಗಿ ಆ ದೇವತೆಗಳನ್ನು ಆರಾಧಿಸಿ ಒಲಿಸಿಕೊಳ್ಳಬೇಕಾಗಿತ್ತು. ಆದರೆ ಮಾನವರು ಯಜ್ಞಯಾಗಾದಿಗಳನ್ನು ಮಾಡಿ ಬಲಿಗಳನ್ನು ಕೊಡಲಿ ಅಥವಾ ಬಿಡಲಿ ಸೂರ್ಯನು ಸದಾ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಅವರಿಗೆ ಮನವರಿಕೆಯಾಯಿತು. ಅನಂತರ ಸೂರ್ಯ, ಚಂದ್ರ ಮತ್ತು ಗ್ರಹಗಳು ಆಕಾಶದಲ್ಲಿ ನಿರ್ದಿಷ್ಟ ಪಥಗಳಲ್ಲಿ ಚಲಿಸುತ್ತವೆ ಮತ್ತು ಆ ಮಾರ್ಗಗಳನ್ನು ಮುಂಚಿತವಾಗಿಯೇ ತಿಳಿಯಬಹುದು ಎಂದು ಕಂಡುಕೊಂಡರು. ಸೂರ್ಯಚಂದ್ರರನ್ನು ಆಗಲೂ ದೇವತೆಗಳೆಂದೇ ಭಾವಿಸಲಾಗುತ್ತಿತ್ತು. ಆದರೆ ಅವರು ಭೌತಿಕ ನಿಯಮಗಳನ್ನು, ಯಾವ ಅಪವಾದವೂ ಇಲ್ಲದೆ, ತಪ್ಪದೆ ಪಾಲಿಸುವ ದೇವತೆಗಳಾಗಿದ್ದರು.
ಪ್ರಾರಂಭದಲ್ಲಿ ಈ ನಿಯಮಗಳು ಖಗೋಳಶಾಸ್ತ್ರಕ್ಕೆ ಮಾತ್ರ ಅನ್ವಯಿ ಸುತ್ತಿದ್ದುವು. ನಾಗರಿಕತೆ ಮುಂದುವರಿದಂತೆಲ್ಲಾ ಕಳೆದ ೩೦೦ ವರ್ಷಗಳಲ್ಲಿ ಹೆಚ್ಚು ನಿಯಮಗಳನ್ನು ಕಂಡುಹಿಡಿಯಲಾಯಿತು. ೧೯ನೇ ಶತಮಾನದ ಪ್ರಾರಂಭದಲ್ಲಿ ಈ ನಿಯಮಗಳಿಂದ ಪ್ರೇರಿತನಾಗಿ ಲಾಪ್ಲೇಸ್ ಒಂದು ವೈಜ್ಞಾನಿಕ ಸಿದ್ಧಾಂತವನ್ನು ಮಂಡಿಸಿದ. ವಿಶ್ವಕಾಯಗಳ ಒಂದು ಕಾಲದ ಸಾಪೇಕ್ಷ ಸ್ಥಾನಗಳನ್ನು ನೀಡಿದಲ್ಲಿ ವಿಶ್ವದ ಉಗಮವನ್ನು ಖಚಿತವಾಗಿ ನಿರ್ಧರಿಸುವ ಕೆಲವು ನಿಯಮಗಳನ್ನು ಅವನು ಸಾದರಪಡಿಸಿದ.
ಲಾಪ್ಲೇಸನ ಸಿದ್ಧಾಂತ ಎರಡು ರೀತಿಯಲ್ಲಿ ಅಪೂರ್ಣವಾಗಿತ್ತು. ಅದು ನಿಯಮಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಮತ್ತು ಅದು ಆಕಾಶಕಾಯಗಳ ಆರಂಭದ ಸಾಪೇಕ್ಷ ಸ್ಥಾನ ಹೇಗಿತ್ತು ಎಂಬುದನ್ನು ಹೇಳಲಿಲ್ಲ. ಅವುಗಳನ್ನು ದೇವರಿಗೆ ಬಿಡಲಾಯಿತು! ವಿಶ್ವವು ಹೇಗೆ ಆರಂಭವಾಯಿತು ಎಂಬುದನ್ನು ದೇವರು ಆಯ್ಕೆ ಮಾಡಿಕೊಳ್ಳುತ್ತಾನೆ ಮತ್ತು ಅದು ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದನ್ನೂ ಅವನೇ ತೀರ್ಮಾನಿಸುತ್ತಾನೆ! ಆದರೆ ಒಂದು ಸಾರಿ ವಿಶ್ವ ಉಗಮವಾದಮೇಲೆ ಅವನು ಅದರ ವ್ಯವಹಾರಗಳಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ! ಒಟ್ಟಿನಲ್ಲಿ ೧೯ನೇ ಶತಮಾನದ ವಿಜ್ಞಾನ ಯಾವುದನ್ನು ಅರ್ಥ ಮಾಡಿಕೊಳ್ಳಲು ಆಸಮರ್ಥವಾಗಿತ್ತೋ ಅಷ್ಟನ್ನು ಮಾತ್ರ ದೇವರ ವ್ಯಾಪ್ತಿಗೆ ಬಿಡಲಾಗಿತ್ತು!
ಲಾಪ್ಲೇಸನ ಸಿದ್ಧಾಂತಗಳನ್ನು ಅವನು ಭಾವಿಸಿದಂತೆ ಪರಿಗ್ರಹಿಸಲು ಸಾಧ್ಯವಿಲ್ಲ ಎಂದು ಈಗ ನಮಗೆ ಗೊತ್ತಿದೆ. ಕ್ವಾಂಟಮ್ ಯಾಂತ್ರಿಕತೆಯ ಅನಿಶ್ಚಿತತಾ ತತ್ವವು ಕೆಲವು ಸೂಕ್ಷ್ಮವಸ್ತುವಿನ ಸ್ಥಾನ ಮತ್ತು ವೇಗಗಳಂತಹ ಪ್ರಮಾಣ ದ್ವಂದ್ವಗಳನ್ನು ಪೂರ್ಣ ಖಚಿತವಾಗಿ ನಿರ್ಧರಿಸುವುದು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.
ಕ್ವಾಂಟಮ್ ಯಾಂತ್ರಿಕತೆಯು ಕೆಲವು ಸಿದ್ಧಾಂತಗಳ ಮೂಲಕ ಈ ಸ್ಥಿತಿಯನ್ನು ವಿವರಿಸುತ್ತದೆ. ಸೂಕ್ಷ್ಮವಸ್ತುಗಳಿಗೆ ಖಚಿತವಾದ ನಿರ್ದಿಷ್ಟಸ್ಥಾನ ಮತ್ತು ವೇಗಗಳಿರುವುದಿಲ್ಲ. ಆದರೆ ಅವುಗಳನ್ನು ಒಂದು ಅಲೆಯ ಮೂಲಕ ಪ್ರತಿನಿಧಿಸಬಹುದು. ಈ ಕ್ವಾಂಟಮ್ ಸಿದ್ಧಾಂತ ಒಂದು ಅರ್ಥದಲ್ಲಿ ಖಚಿತವಾದುದು. ಕಾಲದೊಡನೆ ಅಲೆಯು ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದರ ನಿಯಮಗಳನ್ನು ಅದು ತಿಳಿಸುತ್ತದೆ. ಹೀಗೆ ಒಂದು ಕಾಲದ ಅಲೆಯನ್ನು ತಿಳಿಯ ಬಹುದಾದರೆ ಅದರಿಂದ ಬೇರೆ ಯಾವುದೇ ಕಾಲದ ಅಲೆಯನ್ನು ಲೆಕ್ಕಹಾಕಬಹುದು. ನಾವು ಅಲೆಯನ್ನು ವಸ್ತುವಿನ ಸ್ಥಾನ ಮತ್ತು ವೇಗಗಳ ಮೂಲಕ ವ್ಯಾಖ್ಯಾನಿಸಲು ಹೊರಟಾಗ ಮಾತ್ರ ಅನಿಶ್ಚಿತತೆಯ ಅಂಶ ತಲೆದೋರುತ್ತದೆ. ಅದು ಬಹುಶಃ ನಮ್ಮ ದೋಷ. ಏಕೆಂದರೆ ಸೂಕ್ಷ್ಮ ವಸ್ತುವಿಗೆ ಅಲೆಗಳು ಮಾತ್ರ ಇದ್ದು ಸ್ಥಾನ ಮತ್ತು ವೇಗಗಳು ಇಲ್ಲದಿರಬಹುದು. ನಾವು ಅಲೆಗಳನ್ನು ನಮ್ಮ ಪೂರ್ಮ ನಿಶ್ಜಿತ ವಿಚಾರಗಳಾದ ಸ್ಥಾನಗಳು ಮತ್ತು ವೇಗಗಳಿಗೆ ಸರಿಹೊಂದಿಸಿ ಹೇಳಲು ಪ್ರಯತ್ನಿಸುತ್ತಿರುತ್ತೇವೆ. ಆ ರೀತಿ ಅವು ಸರಿಹೊಂದದಿರುವುದೇ ಅಲ್ಲಿ ತೋರುವ ಅನಿಶ್ಚಿತತೆಗೆ ಕಾರಣವಾಗಿರುತ್ತದೆ.
ಅದರ ಪರಿಣಾಮವಾಗಿ ವಿಜ್ಞಾನದ ವ್ಯಾಪ್ತಿಯನ್ನು ಪುನರ್ ವ್ಯಾಖ್ಯಾನಿ ಸಲಾಗಿದೆ. ಈ ಅನಿಶ್ಚಿತತೆಯ ತತ್ವವು ಗೊತ್ತುಪಡಿಸಿರುವ ಮಿತಿಯೊಳಗೆ ನಾವು ಘಟನೆಗಳ ಭವಿಷ್ಯವನ್ನು ಲೆಕ್ಕಹಾಕುವಂತಹ ನಿಯಮಗಳನ್ನು ಕಂಡು ಹಿಡಿಯುವುದು ನಮ್ಮ ಕೆಲಸವಾಗಿದೆ. ಏನೇ ಇರಲಿ, ಮೂಲ ಪ್ರಶ್ನೆ ಹಾಗೇ ಉಳಿಯುತ್ತದೆ. ವಿಶ್ವದ ಆರಂಭದ ಸ್ಥಿತಿ ಮತ್ತು ಅದಕ್ಕೆ ಕಾರಣವಾದ ನಿಯಮಗಳನ್ನು ಹೇಗೆ ಅಥವಾ ಏತಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು?
ಸ್ಟೀಫನ್ ಹಾಕಿಂಗ್ ಅವರು ’ಕಾಲದ ಸಂಕ್ಷಿಪ್ತ ಚರಿತ್ರೆ’ಯಲ್ಲಿ ಗುರುತ್ವಾಕರ್ಷಣೆಗೆ ಸಂಬಂಧಿಸಿದ ನಿಯಮಗಳ ಬಗ್ಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಏಕೆಂದರೆ ನಾಲ್ಕು ರೀತಿಯ ಶಕ್ತಿಗಳೊಳಗೆ ಗುರುತ್ವಾಕರ್ಷಣೆಯು ಅತ್ಯಂತ ದುರ್ಬಲವಾದುದಾದರೂ ವಿಶ್ವದ ಬಹು ವಿಸ್ತಾರವಾದ ರಚೆನೆಯಲ್ಲಿ ಅದು ಮುಖ್ಯಪಾತ್ರ ವಹಿಸುತ್ತದೆ. ಎಲೆಕ್ಟ್ರೊಮ್ಯಾಗ್ನೆಟಿಕ್ ಶಕ್ತಿ, ದುರ್ಬಲ ನ್ಯೂಕ್ಲಿಯರ್ ಶಕ್ತಿ ಮತ್ತು ಪ್ರಬಲ ನ್ಯೂಕ್ಲಿಯರ್ ಶಕ್ತಿಗಳು ಉಳಿದ ಮೂರು ರೀತಿಯ ಶಕ್ತಿಗಳು. ವಿಶ್ವವು ಶಾಶ್ವತವಾಗಿ ಒಂದೇ ರೀತಿ ಇರುತ್ತದೆ ಎಂದು ಇತ್ತೀಚಿನವರೆಗೂ ನಂಬಲಾಗಿತ್ತು. ಈ ದೃಷ್ಟಿಗೆ ಗುರುತ್ವಾಕರ್ಷಣೆ ನಿಯಮಗಳು ಸರಿಹೊಂದುವುದಿಲ್ಲ. ಗುರುತ್ವಾಕರ್ಷಣ ಯಾವಾಗಲೂ ಆಕರ್ಷಿಸುತ್ತಲೇ ಇರುತ್ತದೆ ಎಂಬ ಸತ್ಯಾಂಶವು ವಿಶ್ವವು ಯಾವಾಗಲೂ ವಿಸ್ತಾರಗೊಳ್ಳುತ್ತಲೋ ಇಲ್ಲವೆ ಸಂಕುಚಿತಗೊಳ್ಳುತ್ತಲೋ ಇರಬೇಕು ಎಂಬುದನ್ನು ದೃಢಪಡಿಸುತ್ತದೆ. ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಪ್ರಕಾರ ಹಿಂದೆ ಅತ್ಯಂತ ಸಾಂದ್ರತೆ ಇದ್ದಿರಬೇಕು. ಅದು ಬೃಹತ್ ಉಗಮ (big bang) ಕ್ಕೆ ನಾಂದಿಯಾಯಿತು.
೧೯೨೯ರಲ್ಲಿ ಎಡ್ವಿನ್ ಹಬಲ್ ಒಂದು ಮುಖ್ಯ ಸಂಗತಿಯನ್ನು ಗುರುತಿಸಿದ. ಎತ್ತೆತ್ತ ನೋಡಿದರೂ ದೂರದ ತಾರಾ ಪುಂಜಗಳು ನಮ್ಮಿಂದ ಬಹುವೇಗವಾಗಿ ದೂರ ಸರಿಯುತ್ತಿವೆ ಎಂದು ಕಂಡುಕೊಂಡ, ಬೇರೆ ಮಾತಿನಲ್ಲಿ ಹೇಳುವುದಾದರೆ ವಿಶ್ವ ವಿಸ್ತಾರಗೊಳ್ಳುತ್ತಿದೆ ಎಂದು ಅದರ ಅರ್ಥ. ಅಂದರೆ ಬಹುಹಿಂದೆ ವಸ್ತುಗಳು ಹತ್ತಿರ ಇದ್ದುವು. ವಾಸ್ತವವಾಗಿ ಸುಮಾರು ಹತ್ತಿಪ್ಪತ್ತು ಸಾವಿರ ಮಿಲಿಯನ್ ವರ್ಷಗಳ ಹಿಂದೆ ಅವುಗಳೆಲ್ಲಾ ಒಂದೇ ಸ್ಥಳದಲ್ಲಿದ್ದುವು. ಆಗ ವಿಶ್ವದ ಸಾಂದ್ರತೆಯು ಅತ್ಯಂತ ಅಪಾರವಾಗಿತ್ತು. ಈ ಶೋಧನೆ ವಿಶ್ವದ ಉಗಮದ ಕಲ್ಪನೆಗೆ ನಾಂದಿಯಾಯಿತು. ಈ ಬೃಹತ್ ಉಗಮದ ಸಂದರ್ಭದಲ್ಲಿ ವಿಶ್ವವು ಅತ್ಯಂತ ಚಿಕ್ಕದಾಗಿತ್ತು ಮತ್ತು ಅಪಾರ ಸಾಂದ್ರವಾಗಿತ್ತು. ಆಗ ಯಾವ ನಿಯಮಗಳೂ ಇರಲಿಲ್ಲ. ಬೃಹತ್ ಉಗಮದಿಂದ ಕಾಲ ಪ್ರಾರಂಭವಾಯಿತು ಎಂದು ಹೇಳಬಹುದು. ಅದಕ್ಕೆ ಮೊದಲು ಏನಾದರೂ ನಡೆದಿದ್ದರೆ ಅದು ಈಗಿನ ನಿಯಮಗಳಿಗೆ ಒಳಪಡುವುದಿಲ್ಲ.
ವಿಶ್ವವು ವಿಸ್ತಾರಗೊಳ್ಳದೆ ಒಂದೇ ರೀತಿಯಲ್ಲಿ ಇದ್ದುದಾದರೆ ದೇವರು ವಿಶ್ವವನ್ನು ಅವನಿಗೆ ಬೇಕೆಂದಾಗ ಸೃಷ್ಟಿಸಿದ ಎಂದು ಊಹಿಸಬಹುದಾಗಿತ್ತು. ವಿಶ್ವವು ವಿಸ್ತಾರಗೊಳ್ಳುತ್ತಿದ್ದರೆ ವಿಶ್ವದ ಉಗಮಕ್ಕೆ ಭೌತಿಕ ಕಾರಣಗಳಿರಬೇಕು. ಒಂದು ಪಕ್ಷ ದೇವರೇ ವಿಶ್ವವನ್ನು ಸೃಷ್ಟಿಸಿದ್ದರೂ ಅವನು ಅನೇಕ ಭೌತಿಕ ನಿಯಮಗಳಿಗೆ ಒಳಗಾಗಿ ಆ ಕೆಲಸ ಮಾಡಿರಬೇಕು. ಅಂದರೆ ಅವನು ಸರ್ವಶಕ್ತನೂ ಅಲ್ಲ; ಸ್ವತಂತ್ರನೂ ಅಲ್ಲ ಎಂದಾಯಿತು!
ಅದೇರೀತಿ ಸಮಸ್ತ ವಿಶ್ವನಾಶಗೊಂಡರೆ ಭವಿಷ್ಯದಲ್ಲಿ ಇನ್ನೊಂದು ಅತ್ಯಂತ ಸಾಂದ್ರತೆಯ ಸ್ಥಿತಿ ಉಂಟಾಗುತ್ತದೆ. ಅದು ಬೃಹತ್‌ಪ್ರಳಯ (big crunch). ಅಲ್ಲಿಗೆ ಕಾಲದ ಕೊನೆಯಾಗುತ್ತದೆ. ಸಮಸ್ತ ವಿಶ್ವವೇನಾಶ ವಾಗದಿದ್ದರೂ ಯಾವುದಾದರೂ ಸ್ಥಳೀಯ ಪ್ರದೇಶಗಳಲ್ಲಿ ನಾಶವಾದ ಅಪರಿಮಿತ ಕಾಲದೇಶ ಸ್ಥಿತಿಗಳು ಉಂಟಾಗುತ್ತವೆ. ಇದರಿಂದ ಕಪ್ಪು ರಂಧ್ರಗಳು ಏರ್ಪಡುತ್ತವೆ. ಸ್ಥಳ ಮತ್ತು ಕಾಲಗಳ ಒಂದು ಪ್ರದೇಶಕ್ಕೆ ಕಪ್ಪುರಂಧ್ರ ಎಂದು ಹೆಸರು. ಅಲ್ಲಿಂದ ಏನೂ-ಬೆಳಕಿನ ಕಿರಣವೂ-ತಪ್ಪಿಸಿಕೊಳ್ಳಲಾರದು. ಏಕೆಂದರೆ ಅಲ್ಲಿ ಗುರುತ್ವಾಕರ್ಷಣೆಯು ಅಷ್ಟು ಗಾಢವಾಗಿರುತ್ತದೆ. ಆ ಕಪ್ಪು ರಂಧ್ರಗಳಲ್ಲಿ ಯಾರು ಬೀಳುವರೋ ಅವರು ಕಾಲದ ಕೊನೆ ತಲುಪಿದಂತೆಯೇ! ಬೃಹತ್ ಉಗಮ ಮತ್ತು ಕಪ್ಪು ರಂಧ್ರಗಳಲ್ಲಿ ವಿಶ್ವದ ನಿಯಮಗಳು ಮುರಿದು ಬೀಳುತ್ತವೆ.
ನಾವು ಕ್ವಾಂಟಮ್ ಯಾಂತ್ರಿಕತೆಯನ್ನು ಸಾಮಾನ್ಯ ಸಾಪೇಕ್ಷ ಸಿದ್ಧಾಂತ ದೊಡನೆ ಒಟ್ಟುಗೂಡಿಸಿದರೆ ಹಿಂದೆ ಕಾಣಿಸದ ಒಂದು ಹೊಸ ಸಾಧ್ಯತೆ ತಲೆ ದೋರುತ್ತದೆ. ಸ್ಥಳ ಮತ್ತು ಕಾಲಗಳು ಸೇರಿ ಸೀಮಿತವಾದ ನಾಲ್ಕು ಆಯಾಮಗಳ ಮತ್ತು ಎಲ್ಲೆಗಳಿರದ ಸ್ಥಳಗಳನ್ನು ಉಂಟುಮಾಡುತ್ತವೆ. ಅದು ಭೂಮಿಯ ಮೇಲ್ಪದರದಂತೆ ಇರುತ್ತದೆ. ಆದರೆ ಅದಕ್ಕೆ ಹೆಚ್ಚು ಆಯಾಮ ಗಳಿರುತ್ತವೆ. ಈ ಅಂಶವು ವಿಶ್ವದ ಅನೇಕ ಲಕ್ಷಣಗಳ ಕಾರಣಗಳನ್ನು ವಿವರಿಸುತ್ತದೆ. ಆಕಾಶಗಂಗೆ, ನಕ್ಷತ್ರಗಳು ಮತ್ತು ಮಾನವರಂತಹ ಬೃಹತ್ ಗಾತ್ರದ ಏಕರೂಪತೆ ಮತ್ತು ಸೂಕ್ಷ್ಮಗಾತ್ರದ ವಿಭಿನ್ನತೆಗಳನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು. ಅದು ನಾವು ಪರಿವೀಕ್ಷಿಸುವ ಕಾಲ ಬಾಣ (Arrow of Time) ಕ್ಕೂ ಅನ್ವಯಿಸುತ್ತದೆ. ಆದರೆ ವಿಶ್ವವು ಸಂಪೂರ್ಣವಾಗಿ ಸ್ವಯಂಪೂರ್ಣವಾಗಿದ್ದು, ಸೀಮಾತೀತವಾಗಿದ್ದು ಮತ್ತು ಏಕಮೇವ ಸಿದ್ಧಾಂತದ ಮೂಲಕ ವಿವರಿಸಲ್ಪಡುವಂತಿದ್ದರೆ ಮಾತ್ರ ದೇವರ ಅಥವಾ ಸೃಷ್ಟಿಕರ್ತನ ಪಾತ್ರದ ಬಗ್ಗೆ ಮಹತ್ವದ ಅರ್ಥ ಹೊಮ್ಮುತ್ತದೆ.
"ವಿಶ್ವವನ್ನು ರಚಿಸಲು ದೇವರಿಗೆ ಎಷ್ಟು ಸ್ವಾತಂತ್ರ್ಯವಿತ್ತು?" ಎಂದು ಐನ್‌ಸ್ಟೀನ್ ಒಮ್ಮೆ ಪ್ರಶ್ನಿಸಿದ್ದರು. ಸೀಮಾತೀತ ಸಿದ್ಧಾಂತ ಸರಿಯಾಗಿದ್ದರೆ ದೇವರಿಗೆ ಆರಂಭದ ಸ್ಥಿತಿಯನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿರಲಿಲ್ಲ. ಆದರೂ ವಿಶ್ವವು ಅನುಸರಿಸುವ ನಿಯಮಗಳನ್ನು ಆಯ್ಕೆ ಮಾಡಿಕೊಳ್ಳಲು ಅವನಿಗೆ ಸ್ವಾತಂತ್ರ್ಯವಿತ್ತು. ಆದರೆ ಇದು ಸ್ವಾತಂತ್ರ್ಯ ಎಂಬ ಹೆಸರಿಗೆ ಅಷ್ಟು ತಕ್ಕುದಲ್ಲವೇನೊ.
ವಿಶ್ವದ ಉಗಮದ ಬಗ್ಗೆ ಒಂದು ಪಕ್ಷ ಒಂದೇ ಏಕರೂಪದ ಸಿದ್ಧಾಂತವಿದ್ದರೆ ಅದು ಕೇವಲ ನಿಯಮಗಳ ಮತ್ತು ಸಮೀಕರಣಗಳ ಒಂದು ಕಡತ ಮಾತ್ರವಾಗಿರಲು ಸಾಧ್ಯ. ಹಾಗೆ ವಿಶ್ವವನ್ನು ವಿವರಿಸಲು ರೂಪಿಸಿದ ಸಮೀಕರಣಗಳೊಳಗೆ ಅಗ್ನಿಯು ಉಸಿರಾಡುವಂತೆ ಮಾಡಿದುದು ಯಾವುದು? ವಿವರಿಸಲು ಸಾಧ್ಯವಾಗುವಂತೆ ವಿಶ್ವದ ಮಾದರಿಯು ಏಕೆ ಮತ್ತು ಹೇಗೆ ಉಂಟಾಯಿತು? ಸಾಮಾನ್ಯವಾದ ಗಣಿತದ ಮಾದರಿಯ ಪ್ರಶ್ನೆಗೆ ಉತ್ತರ ವಾಗಲಾರದು. ವಿಶ್ವ ಏಕೆ ಅಸ್ತಿತ್ವದಲ್ಲಿದೆ? ಏಕರೂಪದ ಸಿದ್ಧಾಂತವು ತನಗೆ ತಾನೆ ವಿಶ್ವವನ್ನು ಉಂಟು ಮಾಡಿತೆ? ಅಥವಾ ವಿಶ್ವದ ರಚನೆಗೆ ಒಬ್ಬ ಸೃಷ್ಟಿ ಕರ್ತ ಅಗತ್ಯವೆ? ಅಥವಾ ಸೃಷ್ಟಿಕಾರ್ಯಕ್ಕಿಂತ ಬೇರೆಯಾದ ಮತ್ತೇನಾದರೂ ಪರಿಣಾಮಗಳನ್ನು ವಿಶ್ವದ ಮೇಲೆ ಬೀರಬಲ್ಲನೆ? ಅಲ್ಲದೆ ಅವನನ್ನು ಯಾರು ಸೃಷ್ಟಿಸಿದರು? ಈ ಪ್ರಶ್ನೆಗಳಿಗೆ ಉತ್ತರ ದೊರಕಿಲ್ಲ. ಇದುವರೆಗೂ ಎಲ್ಲ ವಿಜ್ಞಾನಿಗಳು ವಿಶ್ವ ’ಏನು’ ಎಂಬುದನ್ನು ವಿವರಿಸಲು ಪ್ರಯತ್ನಿಸಿದ್ದಾರೆಯೇ ಹೊರತು ವಿಶ್ವ ’ಏಕೆ’ ಉಗಮವಾಯಿತು, ’ಏಕೆ’ ಅಸ್ತಿತ್ವದಲ್ಲಿದೆ ಎಂಬುದನ್ನು ವಿವರಿಸಲು ಪ್ರಯತ್ನಿಸಿಲ್ಲ. ಇನ್ನೊಂದು ಕಡೆ, ’ಏಕೆ’ ಎಂದು ಕೇಳುವುದನ್ನೆ ತಮ್ಮ ಜೀವನೋದ್ದೇಶವನ್ನಾಗುಳ್ಳ ತತ್ವಜ್ಞಾನಿಗಳು ಬೆಳೆಯುತ್ತಿರುವ ವೈಜ್ಞಾನಿಕ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿದ್ದಾರೆ. ೧೮ನೆ ಶತಮಾನದಲ್ಲಿ ತತ್ವಜ್ಞಾನಿಗಳು ವಿಜ್ಞಾನವನ್ನೊಳಗೊಂಡು ಎಲ್ಲಾ ಜ್ಞಾನವನ್ನು ತಮ್ಮ ಕ್ಷೇತ್ರವೆಂದು ಭಾವಿಸಿದ್ದರು. ವಿಶ್ವಕ್ಕೆ ಆರಂಭ ಎಂಬುದಿದೆಯೆ ಎಂಬಂತಹ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಿದ್ದರು. ಆದರೆ ೧೯ ಮತ್ತು ೨೦ನೆ ಶತಮಾನದಲ್ಲಿ ಖಗೋಳ ವಿಜ್ಞಾನವು ತತ್ವಜ್ಞಾನಿಗಳಿಗೆ ತುಂಬಾ ತಾಂತ್ರಿಕ ಮತ್ತು ಗಣಿತಮಯ ವಾಯಿತು. ಕೆಲವು ಪರಿಣಿತರನ್ನು ಹೊರುತುಪಡಿಸಿ ವಿಜ್ಞಾನಿಗಳಿಗೆ ಸಹ ಅದು ಹಾಗೆನ್ನಿಸತೊಡಗಿತು. ಆದ್ದರಿಂದ ತತ್ವಜ್ಞಾನಿಗಳು ತಮ್ಮ ಅನ್ವೇಷಣೆಯ ವ್ಯಾಪ್ತಿಯನ್ನು ತುಂಬಾ ಸಂಕುಚಿತಗೊಳಿಸಿಕೊಂಡರು. ಈ ಶತಮಾನದ ಅತ್ಯಂತ ಪ್ರಖ್ಯಾತ ತತ್ವಜ್ಞಾನಿ ವಿಟ್‌ಜೆನ್‌ಸ್ಟೀನ್ "ತತ್ವಜ್ಞಾನದ ಉಳಿದ ಕೆಲಸ ಭಾಷೆಯನ್ನು ವಿಶ್ಲೇಷಣೆ ಮಾಡುವುದು ಮಾತ್ರವಾಗಿದೆ" ಎಂದು ಹೇಳಿದ್ದಾರೆ. ಅರಿಸ್ಟಾಟಲ್‌ನಿಂದ ಪ್ರಾರಂಭವಾಗಿ ಕಾಂಟ್‌ನವರೆಗೆ ಹರಿದುಬರುವ ವೇಳೆಗೆ ತತ್ವಜ್ಞಾನವು ಎಂತಹ ಆಧೋಗತಿಯನ್ನು ತಲುಪಬೇಕಾಯಿತು! ಏನೇ ಇರಲಿ, ನಾವು ಒಂದು ಸಂಪೂರ್ಣ ಸಿದ್ಧಾಂತವನ್ನು ಕಂಡುಹಿಡಿದುದಾರೆ ಕಾಲಗತಿಯಲ್ಲಿ ಅದು ಎಲ್ಲೊ ಕೆಲವು ವಿಜ್ಞಾನಿಗಳಿಗೆ ಮಾತ್ರವಲ್ಲ ಎಲ್ಲರಿಗೂ, ಸ್ಥೂಲ ತತ್ವದಲ್ಲಿ ಯಾದರೂ, ಅರ್ಥವಾಗಬೇಕು, ಆಗ ನಾವೆಲ್ಲಾ-ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತು ಸಾಮಾನ್ಯಜನರು-ವಿಶ್ವ ಮತ್ತು ನಾವು ಏಕೆ ಅಸ್ತಿತ್ವದಲ್ಲಿದ್ದೇವೆ ಎಂಬ ಪ್ರಶ್ನೆಯನ್ನು ಕುರಿತು ಚರ್ಚೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಸ್ಟೀಫನ್ ಹಾಕಿಂಗರು ಅಭಿಪ್ರಾಯ ಪಡುತ್ತಾರೆ. ಆ ಪ್ರಶ್ನೆಗೆ ಉತ್ತರವನ್ನು ನಾವು ಕಂಡುಹಿಡಿದಾಗ ಅದು ಮಾನವನ ಬುದ್ದಿಶಕ್ತಿಯ ಅಂತಿಮ ವಿಜಯವಾಗುತ್ತದೆ. ಆಗ ನಾವು ದೇವರ ಮೆದುಳಿನಲ್ಲೇನಿದೆ ಎಂಬುದನ್ನು ತಿಳಿದಂತಾಗುತ್ತದೆ.